-ದ್ರೋಣನು ಹಸ್ತಿನಾಪುರದ ಅರಸುಮಕ್ಕಳಿಗೆ ಶಸ್ತ್ರವಿದ್ಯಾಪ್ರದರ್ಶನವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಅರ್ಜುನನಿಗೆ ಸವಾಲಾಗಿ ಸಭೆಯ ಮಧ್ಯದಿಂದ ಎದ್ದು ಬಂದ ಸೂತಪುತ್ರನೆನಿಸಿದ್ದ ಧೀರನಾದ ಕರ್ಣನನ್ನು ಹೀನಕುಲದವನೆಂಬ ನೆಪದಲ್ಲಿ ದೂರವಿಡಲೆತ್ನಿಸಿದ ದ್ರೋಣನ ಮಾತಿಗೆ, ದುರ್ಯೋಧನನು, ಕರ್ಣನನ್ನು ಅಂಗರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿ ಸ್ಪರ್ಧೆಗೆ ಅರ್ಹನನ್ನಾಗಿಸಿದ. ಬಳಿಕ ಅವನನ್ನು ಅರಮನೆಗೆ ಕರೆತಂದು ಅಪಾರವಾದ ಪ್ರೀತಿ ವಿಶ್ವಾಸಗಳನ್ನು ತೋರಿಸಿದ. ಇಬ್ಬರೂ ಸ್ನೇಹಕ್ಕೆ ಮತ್ತೊಂದು ಹೆಸರಾದರು. ದುರ್ಯೋಧನನು ಜನಮೆಚ್ಚುಗೆಗೆ ಪಾತ್ರವಾಗಿರುವ ಪಾಂಡವರ ನಿವಾರಣೆ ಹೇಗೆಂದು ಆಲೋಚಿಸತೊಡಗಿದನು-
ಶಸ್ತ್ರವಿದ್ಯೆ ಪ್ರದರ್ಶನ ಕಣದಲಿ ಭೀಮ, ಅರ್ಜುನರ ಶೌರ್ಯವನು
ಕಂಡು ಮತ್ಸರದ ಉಂಡೆ ತಾನಾದ ಯುವರಾಜನು ದುರ್ಯೋಧನನು
ಮನದೊಳಗೇನೋ ವರ್ಣಿಸಲಾಗದ ಅಸಹನೆ ಮನೆಯನು ಮಾಡಿತ್ತು
ಸಹಿಸಲಾಗದಂತಹ ಕೊರಗೇನೋ ಚಿಂತೆಗೆ ಮನವನು ದೂಡಿತ್ತು
ಪಾಂಡವರಿಗೆ ಜನ ತೋರಿದ ಬೆಂಬಲ ಅವನ ನಿದ್ದೆಯನ್ನು ಕೆಡಿಸಿತ್ತು
ಧರ್ಮಜನಲ್ಲಿಯ ಒಳ್ಳೆಯತನಕ್ಕೆ ಪ್ರಜೆಗಳು ಒಲಿದಿಹರೆನಿಸಿತ್ತು
ವೈರಿಯ ಏಳಿಗೆ ಹೇಗೆ ಸಹಿಸುವುದು? ಅವನಿಗೆ ನೆಮ್ಮದಿ ಇರಲಿಲ್ಲ
ವೈರಿ ವಿನಾಶವ ಮಾಡುವವರೆಗೂ ನೆಮ್ಮದಿ ಸಿಗುವಂತಿರಲಿಲ್ಲ!
ಮನದ ಅಶಾಂತಿಯ ಮಾವನ ಬಳಿಯಲಿ ತೋಡಿಕೊಂಡನವ ಸಲುಗೆಯಲಿ
ಶಕುನಿಯು ಅವನನು ಸಂತೈಸುತ್ತಲಿ ನುಡಿದ ಉಪಾಯವ ನಿಮಿಷದಲಿ
ಮಾವನು ನೀಡಿದ ಸಲಹೆಯ ಕೇಳಿದ ದುರ್ಯೋಧನನಿಗೆ ಆನಂದ
ಮಾವನನ್ನು ಬಿಗಿದಪ್ಪುತ ‘ಆಗಲಿ’ ಎನ್ನುತ ನುಡಿದನು ಮುದದಿಂದ
ಶಕುನಿಯ ದುಷ್ಟಾಲೋಚನೆ ಮೇರೆಗೆ ತಂತ್ರವನೊಂದನು ಹೂಡಿದನು
ಆಪ್ತ ಸಚಿವ ಪುರೋಚನನೊಂದಿಗೆ ಮಂತ್ರಾಲೋಚನೆ ನಡೆಸಿದನು!
‘ವಾರಣಾವತ’ವು ಎನ್ನುವ ಪುರದಲಿ ಶಿವದೇವಾಲಯ ಬೀದಿಯಲಿ
ನಗರದ ಜನರಿಗೆ ಹೊರಗಿನ ಜನರಿಗೆ ಅರಿವೇ ಆಗದ ರೀತಿಯಲಿ
ಅರಗು ಮೇಣಗಳ ಇಟ್ಟಿಗೆ ಬಳಸುತ ಅರಮನೆಯೊಂದನು ಕಟ್ಟಿಸಿದ
ಅರಗಿನ ಮನೆಯಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಿದ
ಆರು ತಿಂಗಳಿನ ಅವಧಿಯೊಳಗಾಗಿ ಸುಂದರ ಅರಮನೆಯಾಗಿತ್ತು
ಬಣ್ಣಬಣ್ಣಗಳ ರಂಗಿನ ಅರಮನೆ ಎಲ್ಲರ ಮನೆ ಮಾತಾಗಿತ್ತು!
ಎಂತಹ ಅಂದದ ಅರಮನೆಯೆಂದರೆ ವರ್ಣಿಸಲಾಗದು ಮಾತಿನಲಿ
ಸುಂದರವೆಂದರೆ ಅಷ್ಟೇ ಸಾಲದು ಎಲ್ಲೂ ಇಲ್ಲ ಭೂಲೋಕದಲಿ
ಮಾತಿಗೆ ನಿಲುಕದ ಮಹಲನು ನೋಡಲು ಸಾಕಾಗವು ಈ ಕಣ್ಣುಗಳು
ಎಷ್ಟೇ ನೋಡಲಿ ಮತ್ತೆ ಮತ್ತೆ ತಮ್ಮತ್ತ ಸೆಳೆಯಿತಿವೆ ಬಣ್ಣಗಳು
ನಾಡಿನ ಎಲ್ಲಾ ಜನರನು ಸೆಳೆಯುವ ಮೋಹಕ ಸುಂದರ ಸದನವದು
ಅರಗಿನಮನೆಯೆಂದರಿಯದು ಲೋಕಕೆ, ಬೆಂಕಿ ತಾಗಿದರೆ ಉರಿಯುವುದು!
ಅಂದವು ಇರುವೆಡೆ ಕೆಂಡವು ಇರುವುದು ಅಂದ ಕಂಡು ಮರುಳಾಗದಿರು
ಅಂದ ಚೆಂದಗಳ ಆಕರ್ಷಣೆಯಲಿ ಕೆಂಡವನ್ನು ಕೈಹಿಡಿಯದಿರು
ಸುಂದರ ಗುಲಾಬಿ ಮುಳ್ಳಿನ ಸಂಗಡ ಸುಮ್ಮಾನದಲ್ಲಿಯೇ ನೆಲೆಸುವುದು
ಸುಂದರವಾದದ್ದೆಲ್ಲವು ಜಗದಲಿ ಸುಮಧುರವಲ್ಲೆಂದರಿಯುವುದು
ಶಕುನಿಯು ನೀಡಿದ ಸಲಹೆಯ ಮೇರೆಗೆ ಯುವರಾಜನು ಅತಿ ದುಗುಡದಲಿ
ಸಂಜೆಯ ಸಮಯದಿ ತಂದೆಯ ಕಾಣಲು ಬಂದನು ಅನುಮತಿ ಪಡೆದಲ್ಲಿ
ಹೇಳಿದನವನಿಗೆ “ತಂದೆಯೆ, ಆಲಿಸು ಸಿಂಹಾಸನ ಅಲುಗಾಡುತಿದೆ
ಧರ್ಮನು ಮುಂದಿನ ರಾಜನಾಗುವನು ಎನ್ನುತ ಜನಪದ ಹೇಳುತಿದೆ
ಹಾಗೇನಾದರೂ ಆದರೆ ಭೀಮನು ರಾಜಸಹೋದರನಾಗುವನು
ಅವನನು ಸಹಿಸಲು ನನ್ನಿಂದಾಗದು ಸಾವಿಗೆ ನಾ ಶರಣಾಗುವೆನು”
ತಂದೆಯು ಹೇಳಿದ- “ನಿಲ್ಲು ಕುಮಾರನೆ, ಅಶುಭದ ಮಾತನ್ನಾಡದಿರು
ಸಾವಿನ ಮಾತನು ಆಡುತ ನನ್ನಯ ಮನಸಿಗೆ ನೋವನು ನೀಡದಿರು
ಕುರುಡನ ಕಣ್ಣಲಿ ನೀರನು ಬರಿಸುವ ಕಾರ್ಯವನೆಂದೂ ಮಾಡದಿರು
ಕೈಲಾಗದ ತಂದೆಯು ಎಂದೆನ್ನುತ ತಾತ್ಸಾರದಿಂದಲಿ ನೋಡದಿರು
ಹುಟ್ಟಿನಿಂದಲೂ ಕುರುಡನೆಂದು ನನ್ನನ್ನು ಕಡೆಗಣಿಸಿ ಸಾಕಿದರು
ಕೆಟ್ಟ ರೀತಿಯಲಿ ನಡೆಯಿಸಿಕೊಂಡರು ನನ್ನನು ಹಳ್ಳಕೆ ನೂಕಿದರು
ಜೀವನದಲಿ ಕಹಿಯನ್ನೇ ಉಣ್ಣುತ ಬದುಕಿ ಉಳಿದಿರುವೆ ನಾನಿನ್ನೂ
ನೋವನುಂಡಿರುವ ನನ್ನ ಬದುಕಿನಲಿ ಎಲ್ಲವೂ ನೀನೆ ನನಗಿನ್ನು
ಕುರುಯುವರಾಜನು ನೀನಿರುವಾಗ ರಾಜರಾಗುವವರಾರಿಲ್ಲಿ?
ಈ ಸಿಂಹಾಸನ ಎಂದೂ ನಿನ್ನದೆ, ನೀನೇ ರಾಜ ಭವಿಷ್ಯದಲಿ!”
ದುರ್ಯೋಧನ ತುಸು ನೆಮ್ಮದಿಗೊಂಡನು ಸಂತಸವಾಯಿತು ಮನದೊಳಗೆ
ಧೃತರಾಷ್ಟ್ರನ ಪ್ರೇಮವು ಗೊತ್ತಿದ್ದಿತು, ತಂದೆಗೆ ಹೇಳಿದನವ ಹೀಗೆ-
“ತಂದೆಯೆ, ಪಾಂಡವಪಕ್ಷದೊಳಿರುವರು ಪ್ರಜೆಗಳು ಹಲವರು ರಾಜ್ಯದಲಿ
ಪಾಂಡವರಿಲ್ಲಿಯೆ ಇದ್ದರೆ ತಪ್ಪದು ತೊಂದರೆ ನಮಗೆ ಭವಿಷ್ಯದಲಿ
ವಾರಣಾವತದ ನಾಡಿಗೆ ಅವರನು ಕಳುಹಿಸು ದೈವದ ಕಾರ್ಯಕ್ಕೆ
ಅಲ್ಲಿನ ಶಿವದೇವಾಲಯದಲ್ಲಿನ ಉತ್ಸವಗಳ ಕೈಂಕರ್ಯಕ್ಕೆ
ಅವರುಗಳಲ್ಲಿಯೇ ಉಳಿಯಲಿ ಕೆಲದಿನ ದೇವರಸೇವೆಯ ಮಾಡುತ್ತ
ದುರ್ಗತಿ ಕಳೆಯಲಿ, ಸದ್ಗತಿ ದೊರೆಯಲಿ ಎನ್ನುತ ದೇವರ ಬೇಡುತ್ತ
ಅವರಿಗೆ ಅಲ್ಲಿಯೆ ಬುದ್ಧಿಯ ಕಲಿಸಿ ನಿವಾರಿಸಿಕೊಳ್ಳುವೆ ಕಾಟವನು
ಮಾಂತ್ರಿಕ ವಿದ್ಯೆಯ ಮಹಿಮೆಗಳಿಂದಲಿ ಮಾಡಿಸಿ ಅವರಿಗೆ ಮಾಟವನು”
ಮಗನ ಮಾತುಗಳ ಮರ್ಮವ ಅರಿಯದ ರಾಜನು ಯೋಚಿಸಿ ಮನದಲ್ಲಿ
ಕೆಲದಿನ ಅವರೂ ಮರೆಯಲಿ ಇರಲೆಂದೆನ್ನುತ ಒಳ್ಳೆಯತನದಲ್ಲಿ
ಮಗನಿಗೆ ಹೇಳಿದ- “ಹಾಗೆಯೇ ಆಗಲಿ, ಈಗಲೆ ಅವರನು ಕರೆಯಿಸುವೆ
ಕುಂತಿಯ ಸಂಗಡ ಪಾಂಡವರೈವರ ವಾರಣಾವತಕೆ ಕಳುಹಿಸುವೆ
ನಿನ್ನ ಮನಸ್ಸಿನ ನೆಮ್ಮದಿಗೋಸ್ಕರ ದಾಯಾದಿಗಳನ್ನು ಸಾಗಿಸುವೆ
ಮನದ ನೆಮ್ಮದಿಯ ಮರಳಿ ಪಡೆದುಕೋ ಎಲ್ಲವನ್ನು ಸರಿದೂಗಿಸುವೆ”
ಯುವರಾಜನು ಅತಿ ಸಡಗರದಿಂದಲಿ ನಡೆದನು ಶಕುನಿಯ ಮನೆಯತ್ತ
ಸುಲಭದಿ ವೈರಿಯ ಜಯಿಸುವೆನೆನ್ನುತ ಮನದಲಿ ಮಂಡಿಗೆ ಸವಿಯುತ್ತ!
ರಾಜನು ಕೂಡಲೆ ಧರ್ಮರಾಯನನ್ನು ಕರೆಯಿಸಿ ತನ್ನಯ ಬಳಿಗಂದು
ಪಕ್ಕದೊಳವನನು ಕೂರಿಸಿಕೊಳ್ಳುತ ಹಿತವನು ನುಡಿದನು ಹೀಗೆಂದು-
“ಪಾಂಡುಕುಮಾರನೆ, ನಿಮ್ಮಯ ಚಿಂತೆಯು ದಿನವೂ ನನ್ನನ್ನು ಕಾಡುತಿದೆ
ಭೀಮ-ಸುಯೋಧನರಿಬ್ಬರ ಮಧ್ಯದಿ ಹೊಂದಿಕೆಯಾಗದೆ ಹೋಗುತಿದೆ
ತಂದೆಯು ಇಲ್ಲದ ತಬ್ಬಲಿ ನೀವ್ಗಳು ನಿಮ್ಮಯ ಒಳಿತಿಗೆ ಹೇಳುವೆನು
ನಿಮಗೊಳಿತಾದರೆ ಸಂತಸಪಡುತಲಿ ನೆಮ್ಮದಿ ಮನವನು ತಾಳುವೆನು
ಪಾಂಡುನಂದನನೆ, ದೈವಕಾರ್ಯವೊಂದೊದಗಿ ಬಂದಿಹುದು ನಿಮಗಿಂದು
ಶಿವನ ಕರುಣೆಯದು ಶಾಶ್ವತವಾಗಲಿ ಬದುಕಿನಲ್ಲಿ ನಿಮಗೆಂದೆಂದೂ
ವಾರಣಾವತದ ಶಿವದೇವಾಲಯ ಉತ್ಸವ ಕಾರ್ಯದಿ ಪಾಲ್ಗೊಳ್ಳಿ
ದೈವಸೇವೆಯನು ಮಾಡಿದಿರಾದರೆ ಸಂಕಟ ಕಳೆವುದು ಬದುಕಲ್ಲಿ”
ಧರ್ಮಜ ನುಡಿದನು- “ತಂದೆಯೆ, ನಿನ್ನಯ ಆಜ್ಞೆಯ ಶಿರಸಾವಹಿಸುವೆನು
ನಮ್ಮಯ ಒಳಿತನು ಬಯಸುವ ನಿನ್ನಯ ಉದಾರ ಮನಸಿಗೆ ನಮಿಸುವೆನು
ತಂದೆಯಂತೆ ನಮ್ಮನ್ನು ಆದರಿಸಿ ನಮ್ಮ ಒಳಿತನ್ನು ಬಯಸಿರುವೆ
ಬಂಧು ಬಾಂಧವರು ಬೆರೆಯರೆಂಬುದನು ಸುಳ್ಳು ಮಾಡಿ ನೀ ತಿಳಿಸಿರುವೆ
ದೈವ ದರ್ಶನಕೆ ತಮ್ಮಂದಿರ ಜೊತೆ ತಾಯಿಯನೂ ಕರೆದೊಯ್ಯುವೆನು
ಅಪ್ಪಣೆಯ ನೀಡಿ, ಆಶೀರ್ವದಿಸು, ಹೋಗಿಯೆ ಬರುವೆವು ನಾವಿನ್ನು”
ಬೆಳ್ಳಗೆ ಇರುವುದು ಹಾಲೆಂದೇ ನಂಬುವ ಜನ ಇರುವರು ಲೋಕದಲಿ
ಹುಳ್ಳಹುಳ್ಳನೆಯ ಕಳ್ಳ ಮನಸ್ಸಿನ ಪೊಳ್ಳನು ಅರಿಯರು ಎದುರಿನಲಿ
ಸುಳ್ಳು ಹೇಳಿದರೂ ಮಳ್ಳರಂತರಯೆ ನಟಿಸುವ ಮಂದಿಯ ನಂಬದಿರಿ
ಬೆಲ್ಲದ ಮಾತನು ಬಲ್ಲವರೆದುರಲಿ ಒಲುಮೆಯ ಮನವನ್ನು ಹೊಂದದಿರಿ
ಮಹಾರಾಜನಿಗೆ ವಂದನೆ ಸಲ್ಲಿಸಿ ಹೊರಟನು ಧರ್ಮಜ ಮರುಘಳಿಗೆ
ಮಮತೆಯ ಮಾತೆಗೆ ವಿಷಯವ ತಿಳಿಸುತ ತನ್ನಯ ತಮ್ಮಂದಿರ ಬಳಿಗೆ!
ಭೀಮಾರ್ಜುನರನು ಕರೆದು ಹೇಳಿದನು- “ವಾರಣಾವತಕೆ ಹೋಗೋಣ
ಅಲ್ಲಿನ ನೂತನ ಶಿವಮಂದಿರದಲ್ಲಿ ದೇವರಪೂಜೆಯ ಮಾಡೋಣ
ತಂದೆಯಂಥ ಧೃತರಾಷ್ಟ್ರನ ಮಾತಿದು, ನಾಳೆಯೆ ಅಲ್ಲಿಗೆ ಹೊರಡೋಣ
ನಮ್ಮೆಲ್ಲರ ಜೊತೆ ಮಾತೆಯು ಬರುವಳು, ಶಿವನ ಕೃಪೆಯನ್ನು ಪಡೆಯೋಣ”
ಅಣ್ಣನ ಮಾತಿಗೆ ಎದುರು ನುಡಿಯುವುದು ಭೀಮಾರ್ಜುನರಿಗೆ ಗೊತ್ತಿಲ್ಲ
ನಕುಲ ಹಾಗೂ ಸಹದೇವರಿಗಂತೂ ಅದರೊಳು ಎರಡನೆ ಮಾತಿಲ್ಲ
ಭೀಷ್ಮ, ದ್ರೋಣ, ಕೃಪ, ವಿದುರಾದಿಗಳಲಿ ಅನುಮತಿ ಪಡೆದರು ಪಾಂಡವರು
ದೈವದ ಕಾರ್ಯಕೆ ತೆರಳುವ ಅವರನು ಸಕಲರು ಆಶೀರ್ವದಿಸಿದರು!
ಕೂಡಲೆ ಎಲ್ಲಾ ಸಿದ್ಧತೆ ನಡೆಯಿತು ಪಾಂಡವರನು ಕಳುಹಿಸಿಕೊಡಲು
ಮನಸಿನಲ್ಲಿಯೇ ಮಂಡಿಗೆ ತಿನ್ನುತ ದುರ್ಯೋಧನ ಶಕುನಿಗಳಿರಲು
ಚೂರೂ ಸಂಶಯ ಬಾರದ ತೆರದಲಿ ಪಾಂಡವರೊಂದಿಗೆ ಬೆರೆಯುತ್ತ
ಒಳ್ಳೆಯ ಮಾತುಗಳಾಡುತಲಿದ್ದರು ಮಾತಲಿ ಜೇನನು ಸುರಿಸುತ್ತ
ಸಂಚು ಏನೆಂದು ಅವರಿಗೆ ಅಲ್ಲದೆ ಬೇರೆಯವರು ಅರಿತಿರಲಿಲ್ಲ
ದುರುಳನಾದ ದುಶ್ಯಾಸನನಲ್ಲೂ ಯುವರಾಜನು ಹೇಳಿರಲಿಲ್ಲ
ಕರ್ಣನು ಇನ್ನೂ ಹೊಸಬನಾಗಿದ್ದ ಅವನ ಅರಿವಿಗೂ ಬರಲಿಲ್ಲ
ದುಷ್ಟಕೂಟದಲಿ ಇದ್ದನಾದರೂ ದುಷ್ಟಗುಣವ ಹೊಂದಿರಲಿಲ್ಲ
ಹಿರಿಯ ಭೀಷ್ಮನೂ ಅರಿಯದೆ ಹೋದನು ಅರಮನೆಯಲ್ಲಿನ ಒಳಗನ್ನು
ಹಿರಿಯತನದಲ್ಲಿ ಮೆರೆಯುತಲಿದ್ದನು, ಅರಿಯಲಿಲ್ಲ ಒಳಹೊರಗನ್ನು!
ದೈವಕಾರ್ಯವನ್ನು ಮುಗಿಸಿದ ಕೂಡಲೆ ಬನ್ನಿರಿ ಎಂದನು ಧೃತರಾಷ್ಟ್ರ
ದುಷ್ಟ ಚಿಂತನೆಯು ಇಲ್ಲದ ತೆರದಲಿ ನಟಿಸಿ ಮುಗಿಸಿ ತನ್ನಯ ಪಾತ್ರ
ಕುಂತಿಯು ಸಂತಸದಿಂದಲಿ ತಾನೂ ಹೊರಟಳು ಮಕ್ಕಳ ಜೊತೆಯಲ್ಲಿ
ದಾರಿಯ ಪಯಣದ ಶುಭವನ್ನು ಕೋರುತ ರಾಜನು ಕಳುಹಿದ ರಥದಲ್ಲಿ
ಶಕುನಿ, ಕರ್ಣ, ದುರ್ಯೋಧನರೆಲ್ಲರು ಕಳುಹಿಸಿಕೊಟ್ಟರು ಮುದದಿಂದ
ಸಕಲ ವ್ಯವಸ್ಥೆಯ ಮಾಡಿ ಕಳುಹಿದರು ಅವರುಗಳನು ಆದರದಿಂದ
ವಿದುರನಿಗೇಕೋ ಮನದಲಿ ಸುಳಿಯಿತು ದೂರದ ಸಂಶಯದೆಳೆಯೊಂದು
ಸಂಶಯ ಮನವನು ಕೊರೆಯುತಲಿರುತಿರೆ ಹೇಳಿದ ಧರ್ಮನ ಬಳಿ ಬಂದು-
“ಹಾದಿಯ ಪಯಣವು ಶುಭವಾಗಿರಲಿ, ಮರೆಯಾಗಲಿ ಅಡೆತಡೆಯೆಲ್ಲ
ಬೆಂಕಿ, ವಿಷವು, ಅತಿವಿನಯವಂತರಲ್ಲಿ ಸಲುಗೆಯು ಎಂದೂ ಒಳಿತಲ್ಲ
ಬೆಳ್ಳಗೆ ಕಾಣುವುದೆಲ್ಲವೂ ಹಾಲು ಎಂಬುದು ಎಂದೂ ನಿಜವಲ್ಲ
ಕಣ್ಣಿರದವನಿಗೆ ದಾರಿಯು ಕಾಣದು ಧೈರ್ಯವು ಇರದಿರೆ ಸುಖವಿಲ್ಲ
ನಮಗೇ ತಿಳಿಯದ ದಾರಿಯು ಇರುವುದು ಹುಡುಕಿಕೊಳುವಂಥ ಮನವಿರಲಿ
ಮೈಮನ ಹಿತವನ್ನು ಬಯಸಿದರೂನು ಮುಂದಿನ ನಡೆ ಎಚ್ಚರವಿರಲಿ”
ವಿದುರನು ಹೇಳಿದ ಎಚ್ಚರ ನುಡಿಗಳು ಕಲಕುತಲಿರೆ ಧರ್ಮನ ಚಿತ್ತ
ಪಾಂಡವರೈವರು ತಾಯಿಯ ಸಂಗಡ ಹೊರಟರು ವಾರಣಾವತದತ್ತ
ದಾರಿಯಲ್ಲೆಲ್ಲ ವಿದುರನ ಮಾತೇ ಗುಂಯ್‌ಗುಡುತಿದ್ದಿತು ಕಿವಿಯಲ್ಲಿ
ಏತಕೆ ಈ ಪರಿ ಹೇಳಿದನೆಂಬುದು ಅರಿಯದೆ ಚಿಂತಿಸಿ ಮನದಲ್ಲಿ
ತಾಯಿಯ ಬಳಿಯಲಿ ವಿಷಯವ ಹೇಳಿದ, ತಮ್ಮಂದಿರಿಗೂ ತಿಳಿಸಿದನು
ಸಂಚೇನಾದರೂ ಇದರೊಳಗಿದೆಯೆ? ಮನದಲಿ ಚಿಂತನೆ ಮಾಡಿದನು
ಶಕುನಿ ಮತ್ತು ದುರ್ಯೋಧನಾದಿಗಳ ಅತಿವಿನಯವು ಎದುರಿಗೆ ಬಂದು
ಅನುಮಾನದ ಎಳೆ ಸುಳಿಯತೊಡಗಿತ್ತು, ಮುಂದೇನೋ ಇರಬಹುದೆಂದು
ಎಚ್ಚರದಲ್ಲಿಯೆ ಮುಂದೆ ಸಾಗಿದರು ದೈವಕಾರ್ಯದಲಿ ಮನವಿಟ್ಟು
ಆದರೂ ತಾಯಿ-ಮಕ್ಕಳ ಮನದಲಿ ಸಂಶಯವೆಂಬುದು ಉಳಿದಿತ್ತು!
*****